ಕರಾವಳಿಯ ರಕ್ಷಣೆ : ಸಮುದ್ರದ ಕರಾವಳಿಯ ಸ್ವಭಾವ ದಡದ ಭೂಗುಣವನ್ನು ಅವಲಂಬಿಸಿದೆ. ಬಂಡೆಗಳಿದ್ದರೆ ಅಲೆಗಳು ದಡವನ್ನು ಸುಲಭವಾಗಿ ಕೊರೆಯಲಾರವು. ಒಂದೇ ನಮೂನೆಯ ಗಟ್ಟಿಯಾದ ಭೂಮಿಯಿದ್ದರೆ ಕೊರೆತ ಕಮ್ಮಿ, ಆದರೆ ಒಂದು ಗಟ್ಟಿಯಾದ ಪದರದ ಮೇಲೆ ಇನ್ನೊಂದು ಮೆತುವಾದದ್ದಿದ್ದರೆ ಸವೆತ ಹೆಚ್ಚಾಗುತ್ತದೆ. ಸಮುದ್ರದ ಮೇಲೆ ಬಗ್ಗಿರುವ ಬಂಡೆಯ ಮುಖ ಕಡಿದಾಗಿದ್ದರೆ ಅಲೆಗಳ ಬಡಿತದಿಂದ ಕೆಳಭಾಗ ಕೊರೆದು ಮೇಲಿನ ಬಂಡೆ ಕೆಳಕ್ಕೆ ಉರುಳುತ್ತದೆ.

ಅಲೆಗಳು, ಪ್ರವಾಹಗಳು ಮತ್ತು ಮಾರುತಗಳು ಸಮುದ್ರದ ತೆರೆದ ದಡಗಳ ಮೇಲೂ ಕೊಲ್ಲಿಗಳ ಮತ್ತು ಅಳಿವೆಗಳ ತೀರಗಳ ಮೇಲೂ ಬಡಿದಾಗ ದಡದ ಮೇಲಿರುವ ಮಣ್ಣು, ಮರಳು ಗ್ರ್ಯಾವೆಲ್ಲು ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತವೆ. ಈ ಚಲನೆಯಿಂದ ಕೆಲವು ಕಡೆ ದಡ ಕೊರೆಯುತ್ತದೆ. ಇನ್ನೂ ಕೆಲವು ಕಡೆ ಮರಳು ತುಂಬಿಕೊಳ್ಳುತ್ತದೆ. ದಡ ಕೊರೆದಾಗ ಬೆಲೆಬಾಳುವ ಭೂಮಿ, ಮನೆಗಳು ಮತ್ತು ರಸ್ತೆಗಳಿಗೆ ತೊಂದರೆಯಾಗುವುದಾದರೆ ಪರಿಹಾರಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಅಲೆಗಳು ಎರಡು ವಿಧಗಳಲ್ಲಿ ಕೊರೆಯುತ್ತವೆ : 1 ದಡದ ಮರಳನ್ನು ಒಂದು ಜಾಗದಿಂದ ಇನ್ನೊಂದು ಕಡೆಗೆ ಸಾಗಿಸುತ್ತವೆ. 2 ದಡದಿಂದ ಮಣ್ಣನ್ನೋ ಮರಳನ್ನೋ ಆಳವಾದ ದಡದ ಕಡೆಗೆ ಒಯ್ಯುತ್ತವೆ. ಇದನ್ನು ನಿವಾರಿಸುವುದಕ್ಕೆ ಮುಂಚೆ ಅಲೆಗಳ ವಿಚಾರವಾಗಿ ಕೊಂಚ ತಿಳಿದುಕೊಳ್ಳಬೇಕು.

ಮಾರುತಗಳು ನೀರಿನ ಮೇಲ್ಮೈಯ ಮೇಲೆ ಬೀಸಿದಾಗ ಅಲೆಗಳು ಉತ್ಪತ್ತಿಯಾಗುತ್ತವೆ. ಅಲೆಗಳ ಎತ್ತರ (1) ಸಮುದ್ರದ ಮೇಲ್ಮೈ ಒಂದೇ ದಿಕ್ಕಿನಲ್ಲಿ ಬೀಸುವ ಗಾಳಿಗೆ ಮೈಯೊಡ್ಡಿರುವ ಉದ್ದ (ಫೆಚ್ಚ್‌), (2) ಗಾಳಿ ಬೀಸುವ ಅವಧಿ ಮತ್ತು (3) ವೇಗ-ಇವಕ್ಕೆ ಅನುಗುಣವಾಗಿದೆ, ನೀರಿನ ಮೇಲೆ ಉತ್ಪನ್ನವಾಗುವ ಅಲೆಗಳು ಒಂದು ಕೊಳದ ಮೇಲೆ ಮಂದಮಾರುತ ಬೀಸಿದಾಗ ಏಳುವ ಕಿರುದೆರೆಗಳಿಂದ ಹಿಡಿದು-ಸಮುದ್ರದ ಮೇಲೆ ಚಂಡಮಾರುತಗಳು, ತುಫಾನು ಮತ್ತು ಬಿರುಗಾಳಿಗಳು ಬೀಸಿದಾಗ ಏಳುವ 60' ಎತ್ತರದ ಅಲೆಗಳ ವರೆಗೂ ವ್ಯತ್ಯಾಸವಾಗುತ್ತವೆ. ಅಲೆಯ ಒಂದು ಶಿಖರದಿಂದ ಇನ್ನೊಂದಕ್ಕೆ ಇರುವ ಅಂತರಕ್ಕೆ ಅಲೆಯ ಉದ್ದವೆನ್ನುತ್ತಾರೆ. ಒಂದೇ ಜಾಗದಲ್ಲಿ ಅಲೆಯ ಒಂದು ಶಿಖರ ಕಾಣಿಸುವುದಕ್ಕೂ ಇನ್ನೊಂದು ಕಾಣಿಸುವುದಕ್ಕೂ ಇರುವ ಕಾಲದ ಅಂತರಕ್ಕೆ ಅಲೆಯ ಅವಧಿಯೆಂದು (ಪೀರಿಯಡ್) ಹೆಸರು. ವಾಸ್ತವವಾಗಿ ಸಮುದ್ರದ ಮೇಲೆ ಬೇರೆ ಬೇರೆ ಉದ್ದಗಳ ಬೇರೆ ಬೇರೆ ಅವಧಿಗಳ ಅಲೆಗಳ ಸಾಲೇ ಕಾಣಿಸುತ್ತವೆ.

ಅಲೆಗಳನ್ನು ಉತ್ಪತ್ತಿ ಮಾಡುವ ಗಾಳಿ ಸ್ಥಳೀಯವಾಗಿದ್ದರೆ ಅವು ಕಡಿದಾಗಿರುತ್ತವೆ. ಎಂದರೆ ಅಲೆಗಳ ಉದ್ದ ಎತ್ತರದ 10-20 ರಷ್ಟಿರುತ್ತವೆ. ಅದಕ್ಕೆ ಪ್ರತಿಯಾಗಿ ಸಮುದ್ರಮಧ್ಯದಲ್ಲಿ ಬಿರುಗಾಳಿಯಿಂದ ಉತ್ಪನ್ನವಾಗಿ ತೀರವನ್ನು ಮುಟ್ಟುವುದಕ್ಕೆ ಮುಂಚೆ ಸಾವಿರಾರು ಕಿಮೀ ಗಳ ಶಾಂತವಾದ ಗಾಳಿ ಬೀಸುತ್ತಿದ್ದರೆ ಅಲೆಗಳ ಉದ್ದ ಎತ್ತರದ 50-500 ರಷ್ಟಿರುತ್ತದೆ. ಈ ಅಲೆಗಳನ್ನು ಸಮುದ್ರದ ಉಬ್ಬರಗಳು (ಸ್ಟೆಲ್) ಎನ್ನುತ್ತಾರೆ.
ಸ್ಥಳೀಯ ಮಾರುತದಿಂದ ಎದ್ದ ಗಿಡ್ಡವೂ ಎತ್ತರವೂ ಆದ ಅಲೆಗಳು ದಡದ ಸಾಮಗ್ರಿಯನ್ನು ನೀರಿನ ಮಟ್ಟದಲ್ಲಿ ಈಚೆಗೆ ಕಿತ್ತು ಎಳೆದು ಆಳವಾದ ಸಮುದ್ರದ ಕಡೆಗೆ ಸಾಗಿಸುತ್ತವೆ. ಆಗ ದಡ ಕೊಚ್ಚಿಹೋಗುತ್ತದೆ. ಆದರೆ ಉಬ್ಬರದ ಅಲೆಗಳು ಮರಳನ್ನು ತಂದು ನೀರಿನ ಮಟ್ಟಿದಲ್ಲಿ ದಡಕ್ಕೆ ತಂದು ತುಂಬುತ್ತವೆ. ಕೆಲವು ಪ್ರದೇಶಗಳಲ್ಲಿ ಈ ಎರಡು ಕೆಲಸಗಳೂ ಒಂದಾದಮೇಲೊಂದು ನಡೆಯುತ್ತವೆ. ಆಳವಾದ ನೀರಿನಿಂದ ದಡದ ಕಡೆಗೆ ಚಲಿಸುವ ಅಲೆಗಳು ವಕ್ರೀಕರಿಸಿ ದಿಕ್ಕನ್ನು ಬದಲಾಯಿಸುತ್ತವೆ. ಇದರ ಫಲವಾಗಿ ಆಳವಿಲ್ಲದ ನೀರಿನಲ್ಲಿ ಸಮುದ್ರ ತೀರಕ್ಕೆ ಸಮಾಂತರವಾಗಿ ನಿಧಾನವಾಗಿ ಚಲಿಸುವ ಪ್ರವಾಹ ಉತ್ಪನ್ನವಾಗುತ್ತದೆ. ಇದಕ್ಕೆ ಕಡಲ ತೆರೆಯ ಪ್ರವಾಹವೆನ್ನುತ್ತಾರೆ (ಲಿಟೊರಲ್ ಕರೆಂಟ್). ಕೆಲವು ಸಂದರ್ಭಗಳಲ್ಲಿ ಇದು ಆಳವಾದ ಸಮುದ್ರದ ಕಡೆಗೆ ತಿರುಗುತ್ತದೆ.

ಆಳವಿಲ್ಲದ ನೀರಿನ ಅಲೆ ದಡದ ಕಡೆಗೆ ಚಲಿಸಿದಾಗ ನೀರಿನ ಆಳ ತೀರ ಕಡಿಮೆಯಾಗಿ ಅಲೆ ಒಡೆಯಬಹುದು. ಆಗ ಅಲೆಯ ಶಕ್ತಿ ಹೊರಹೊಮ್ಮಿ ನೀರು ಕದಡಿ ತಳದಲ್ಲಿರುವ ಮರಳನ್ನು ಕೆದಕುತ್ತವೆ. ಒಡೆದ ಮೇಲೆ ನೊರೆಗರೆಯುತ್ತ ವೇಗವಾಗಿ ಹರಿದು ದಡವನ್ನು ಅಪ್ಪಳಿಸುತ್ತದೆ.
ಮೇಲೆ ನೋಡಿದ ಎರಡು ಪ್ರವೃತಿಗಳೂ ಸೇರಿ ಆಳವಿಲ್ಲದ ನೀರಿನಲ್ಲಿ ದಡದ ಮುಖದಿಂದ ಸಾಮಗ್ರಿಯನ್ನು ತೆಗೆಯುತ್ತವೆ. ಈ ಚಲನೆಗೆ ಕಡಲ ತೆರೆಯ ಚಲನೆಯೆನ್ನುತ್ತಾರೆ (ಲಿಟೊರಲ್ ಡ್ರಿಫ್ಟ್‌). ಈ ಚಲನೆ ಮತ್ತು ಹಿಂದೆ ನೋಡಿದ ದಡದ ಕಡೆಗೂ ದಡದಿಂದ ಸಮುದ್ರದ ಕಡೆಗೂ ಹೋಗುವ ಮರಳಿನ ಚಲನೆ. ಇವು ಸಮುದ್ರತೀರದ ಆಕಾರದ ಬದಲಾವಣೆಗೆ ಮುಖ್ಯ ಕಾರಣಗಳು.

ಅಲೆ ದಡಕ್ಕೆ ಬಡೆಯುವ ದಿಕ್ಕು ಮತ್ತು ರಭಸಕ್ಕೆ ಅನುಗುಣವಾಗಿ ಕಡಲ ಕರೆಯ ಚಲನೆಯ ದಿಕ್ಕೂ ಬಿರುಸೂ ಇವೆ. ವಾಸ್ತವವಾಗಿ ಅನೇಕ ಸಮುದ್ರತೀರಗಳಲ್ಲಿ ದಿನದಿಂದ ದಿನಕ್ಕೂ ಋತುವಿನಿಂದ ಋತುವಿಗೂ ಬದಲಾಗುವ ಹವಾಪರಿಸ್ಥಿತಿಗೆ ಅನುಸಾರವಾಗಿ ಕಡಲ ಕರೆಯ ಚಲನೆ ವ್ಯತ್ಯಾಸವಾಗುತ್ತ ಹೋಗುತ್ತದೆ. ಆದರೂ ಒಂದೊಂದು ತೀರದಲ್ಲಿಯೂ ವರ್ಷದ ಕೊನೆಯಲ್ಲಿ ಈ ಚಲನೆ ಯಾವುದಾದರೂ ಒಂದು ದಿಕ್ಕಿಗೆ ತಿರುಗಿರುತ್ತದೆ. ಈ ಚಲನೆಯ ಪ್ರಮಾಣ ಮತ್ತು ಅದರ ದಿಕ್ಕಿಗೆ ಅನುಸಾರವಾಗಿ ತೀರದ ರಕ್ಷಣೆಯ ಕ್ರಮಗಳನ್ನು ನಿಶ್ಚಿಯಿಸಬೇಕಾಗುತ್ತದೆ.
ಒಂದೇ ಸಮುದ್ರತೀರದಲ್ಲಿ ಈ ಚಲನೆ ವರ್ಷವರ್ಷವೂ ಒಂದೇ ಸಮವಾಗಿದ್ದರೂ ಬೇರೆ ಬೇರೆ ತೀರಗಳಲ್ಲಿ ಇದು ವಿಶೇಷವಾಗಿ ವ್ಯತ್ಯಾಸವಾಗುತ್ತದೆ. ಉತ್ತರ ಅಮೆರಿಕದ ಮಹಾಸರೋವರಗಳು, ಭೂಮಧ್ಯ ಸಮುದ್ರ, ಇಂಥ ಭೂಮಿಯಿಂದ ಸುತ್ತು ವರಿಯಲ್ಪಟ್ಟು ಜಲಭಾಗಗಳಲ್ಲಿ ಈ ಚಲನೆಯ ಪ್ರಮಾಣ ಕಡಿಮೆ. ಆದರೆ ಸಾಗರಗಳ ತೀರದ ತೆರೆದ ದಡಗಳಲ್ಲಿ ಸಾಗಿಹೋಗುವ ಮರಳು ಹೆಚ್ಚು. ಸಮುದ್ರತೀರದ ಆಕಾರ, ತೀರದ ಆಚೆಗೆ ಇರುವ ಮರಳಿನ ದಿಣ್ಣೆಗಳು ಇಲ್ಲವೆ ದ್ವೀಪಗಳು ಮತ್ತು ಅಲೆಗಳ ಹೊಡೆತದ ರಭಸದ ಮೇಲೆ ಒಂದೊಂದು ಜಾಗದಲ್ಲಿಯೂ ಈ ಚಲನೆ ವ್ಯತ್ಯಾಸವಾಗುತ್ತದೆ.

ಅಲೆಗಳಿಂದ ದಡದ ಕೊರೆತ : ಸಮುದ್ರದ ಅಲೆಗಳು ದಡವನ್ನು ತಲುಪಿದಾಗ ಗೋಡು ಮತ್ತು ಮರಳನ್ನು ಕೆದಕಿ ಜೊತೆಗೆ ಸಮುದ್ರತೀರಕ್ಕೆ ಸಮಾಂತರವಾಗಿ ಕಡಲ ತೆರೆಯ ಪ್ರವಾಹವನ್ನು ಹರಿಸುತ್ತವೆಯಷ್ಟೆ. ಈ ಎರಡು ಮಾರ್ಗಗಳಿಂದ ಸಮುದ್ರತೀರದ ಮಣ್ಣು ತೀರದ ಪಕ್ಕದಲ್ಲಿಯೇ ಚಲಿಸುತ್ತದೆ. ಸಾಮಾನ್ಯವಾದ ಅಲೆಗಳೂ ಆ ನೀರನ್ನು ಕಲಕಿದಾಗ ಗೋಡು ಮತ್ತು ಮಣ್ಣು-ಎರಡೂ ಸಮುದ್ರದ ತಳವನ್ನು ಸೇರುತ್ತವೆ. ಕ್ರಮೇಣ ತೀರ ಕೊರೆದು ಹೋಗಿ ದಪ್ಪ ಮರಳು ಮತ್ತು ಸಣ್ಣ ನೊರಜುಕಲ್ಲುಗಳು ಮಾತ್ರ ದಡದಲ್ಲಿ ಉಳಿದುಕೊಳ್ಳುತ್ತವೆ. ದಡದಲ್ಲಿ ಬಂಡೆಗಳಿದ್ದರೆ ಕೊರೆತ ಕೊಂಚ ಕಡಿಮೆಯಾಗುತ್ತದೆ. ಆದರೆ ಮರಳು ಮತ್ತು ಸಣ್ಣ ಕಲ್ಲುಗಳಿರುವ ಸಮುದ್ರತೀರದ ಪಕ್ಕದಲ್ಲಿ ಅಲೆಗಳ ಹೊಡತದಿಂದ ಮರಳಿನಿಂದ ಕೂಡಿದ ನದಿಯೇ ಹರಿಯುವಂತೆ ಇರುತ್ತದೆ. ಈ ವರ್ಷ ಅಲ್ಲಿ ಕಾಣುವ ಮರಳು ಪ್ರವಾಹದಲ್ಲಿ ಹರಿದು ಹೋಗಿ ಮಾರನೆಯ ವರ್ಷ ಮೇಲಿನಿಂದ ಹರಿದುಬರುವ ಬೇರೆ ಮರಳು ಅಲ್ಲಿಗೆ ಬಂದಿರುತ್ತದೆ. ಆದರೆ ಕೆಲವು ಸಮುದ್ರ ತೀರಗಳಲ್ಲಿ ಒಂದು ದಿಕ್ಕಿನಲ್ಲಿ ಹೋಗುವ ಮರಳಿಗೆ ಬದಲಾಗಿ ಎದುರು ದಿಕ್ಕಿನಿಂದ ಮರಳು ಬಂದು ಸಮುದ್ರ ತೀರ ಭದ್ರವಾಗಿರುವುದು. ಹಾಗೆಯೇ ಕೆಲವು ತೀರಗಳಲ್ಲಿ ಬಂದು ಸೇರುವ ಮರಳು ಹೆಚ್ಚಾಗಿಯೂ ಇನ್ನು ಕೆಲವು ತೀರಗಳಲ್ಲಿ ಕೊರೆದು ಹೋಗುವ ಮರಳು ಹೆಚ್ಚಾಗಿಯೂ ಇರಬಹುದು. ತೀರದ ರಕ್ಷಣೆ ಬೇಕಾಗಿರುವುದು ಮರಳು ಕೊರೆಯ ಹೋಗುವಕಡೆಗಳಲ್ಲಿ.

ಗಾಳಿಯಿಂದ ಕೊರೆತ : ಒಣಗಿರುವ ಸಮುದ್ರತೀರದ ಮೇಲೆ ಬೀಸುವ ಗಾಳಿ ಭೂಮಿಯ ಕಡೆಗೆ ಮರಳನ್ನು ಸಾಗಿಸಿ ಮರಳುದಿಣ್ಣೆಗಳನ್ನು ಮಾಡಬಹುದು ಅಥವಾ ಕಡಲ ಕರೆಯ ಪ್ರವಾಹದಿಂದ ಮರಳನ್ನು ಎತ್ತಿ ಕೊರೆತವನ್ನು ಹೆಚ್ಚಿಸಬಹುದು. ಮರಳುದಿಣ್ಣೆಗಳು ದಡಕ್ಕೆ ಹತ್ತಿರವಾಗಿದ್ದರೆ ಬಿರುಗಾಳಿಗಳೊಂದಿಗೆ ಬರುವ ದೊಡ್ಡ ಅಲೆಗಳ ದೆಸೆಯಿಂದ ತೀರವನ್ನು ಕಾಪಾಡುತ್ತವೆ.
ತೀರದ ಕಡೆಗೆ ಬೀಸುವ ಗಾಳಿ ದಡದಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ. ಆಗ ಇನ್ನೂ ದೊಡ್ಡ ಅಲೆಗಳು ದಡವನ್ನು ಮುಟ್ಟಿ ದಡದ ಭದ್ರವಾದ ಭಾಗಗಳನ್ನೂ ಕೊರೆಯಬಹುದು. ಅಲೆಗಳು ಹತ್ತು ಅಡಿಗಳ ವರೆಗೂ ಏರಿದ ನಿದರ್ಶನಗಳಿವೆ. ಅಂಥ ಸಂದರ್ಭಗಳಲ್ಲಿ ದಡದ ಮೇಲೆ ಪ್ರಾಣ ನಾಶವಾಗಬಹುದು. ಆಸ್ತಿ ಮುಳುಗಿಹೋಗಬಹುದು.

ಸಮುದ್ರತೀರದ ಒಳಗಂಡಿಗಳು : ತೆರೆದ ಸಮುದ್ರದ ತೀರಗಳಲ್ಲಿ ಉಪನದಿಗಳು ಅಳಿವೆಗಳಲ್ಲಿ ಒಳಗೆ ನುಗ್ಗುತ್ತವೆ. ಅಳಿವೆಗಳಲ್ಲಿ ನದಿಗಳಲ್ಲಿ ಬರುವ ಸಿಹಿನೀರಿನ ಜೊತೆಗೆ ರಭಸದ ಉಬ್ಬರಗಳಲ್ಲಿ ಒಳಗೆ ಬರುವ ಉಪ್ಪುನೀರು ಸೇರಿರುತ್ತದೆ. ಸಿಹಿನೀರಿನ ಪ್ರಮಾಣ ಹೆಚ್ಚಾಗಿದ್ದರೆ ಅದರಲ್ಲಿ ಗೋಡುಮಣ್ಣು ಮತ್ತು ಗ್ರ್ಯಾವೆಲ್ ಸಮುದ್ರತೀರದವರೆಗೂ ಬರಬಹುದು. ಈ ಸಾಮಗ್ರಿ ಕುದುರಗಳಾಗಿಯೋ (ಡೆಲ್ಟ) ದಿಣ್ಣೆಗಳಾಗಿಯೋ ಸಮುದ್ರ ತೀರದಲ್ಲಿ ದಾಸ್ತಾನಾಗಬಹುದು. ಇಂಥ ಸಾಮಗ್ರಿಯಲ್ಲಿ ಇರುವ ಮರಳು ಅಲೆಗಳಿಗೆ ಸಿಕ್ಕಿ ಕಡಲ ಕರೆಯ ಚಲನೆಯಲ್ಲಿ ಸೇರಿ ತೀರದ ಪಕ್ಕದಲ್ಲಿ ಸಮುದ್ರದಲ್ಲಿ ಸಾಗಿ ಹೋಗಬಹುದು.

ಕೆಲವು ಸಂರ್ಭಗಳಲ್ಲಿ ಉಪನದಿಗಳು ಹೆಚ್ಚಿನ ಸಾಮಗ್ರಿಯನ್ನು ಹೊತ್ತು ತರದೆ ಅಳಿವೆಯಿಂದ ಸಮುದ್ರತೀರಕ್ಕೆ ಬರುವ ಗೋಡುಮಣ್ಣು ಕಡಿಮೆಯಾಗುವುದು. ಆಗ ಕಡಲ ಕರೆಯ ಚಲನೆಯಲ್ಲಿ ಬರುವ ಮಣ್ಣನ್ನು ಒಳಗಂಡಿ ತಡೆದು ನಿಲ್ಲಿಸುತ್ತದೆ. ಈ ಮಣ್ಣು ಹೆಚ್ಚಾದರೆ ಒಳಗಂಡಿಯ ಬಾಯಿ ಮುಚ್ಚಿಹೋಗುತ್ತದೆ. ಇದಕ್ಕೆ ಪ್ರತಿಯಾಗಿ ಉಬ್ಬರದ ನೀರೂ ಹೊಳೆಯಲ್ಲಿ ಬರುವ ಸಿಹಿನೀರೂ ಅದರಲ್ಲಿ ದಾರಿಯನ್ನು ಮಾಡಲು ಪ್ರಯತ್ನಿಸುತ್ತವೆ. ಹೀಗಾಗಿ ಅಳಿವೆಯ ಬಾಯಿಯನ್ನು ಮುಚ್ಚುವ ಮತ್ತು ತೆರೆಯುವ ಶಕ್ತಿಗಳು ಉಯ್ಯಾಲೆಯ ಹಾಗೆ ಆಡುತ್ತವೆ. ಇದರ ಪರಿಣಾಮವಾಗಿ ಸ್ಥಳವನ್ನು ಬದಲಾಯಿಸುವ ಮರಳುದಿಣ್ಣೆಗಳಲ್ಲಿ ಸೊಟ್ಟ ಸೊಟ್ಟಾದ ನಾಲೆಗಳು ಬಳಸುತ್ತವೆ. ಕಡಲಕರೆಯ ಚಲನದಲ್ಲಿ ಮರಳು ಹೆಚ್ಚಾಗಿ ಬಂದರೆ ದಿಣ್ಣೆಗಳ ಒಳಕ್ಕೆ ನುಗ್ಗಿ ದಾರಿಯನ್ನು ಮಾಡಬಹುದು.

ಮಾನವ ನಿರ್ಮಿತವಾದ ಕೊರೆತ : ಯಾರೂ ಬೇಕಾಗಿ ಸಮುದ್ರತೀರವನ್ನು ಕೊರೆಯುವ ದೃಷ್ಟಿಯಿಂದ ಏನನ್ನೂ ಮಾಡುವುದಿಲ್ಲ. ಬೇರೆ ಯಾವುದೋ ಮೇಲ್ಪಾಡನ್ನು ಮಾಡಲು ಹೋದಾಗ ಈ ಪರಿಣಾಮವಾಗುತ್ತದೆ. ಕೆಲವು ವೇಳೆ ಹೀಗೆ ಸಮುದ್ರತೀರ ಕೊರೆಯಬಹುದೆಂಬ ನಿರೀಕ್ಷೆಯೂ ಇರುತ್ತದೆ.

ಅಲೆತಡೆಗಳು : ಬಂದರಿನೊಳಗೆ ಬರುವ ಹಡಗುಗಳಿಗೆ ಅಲೆಗಳ ಹೊಡತದಿಂದ ರಕ್ಷಿತವಾದ ಜಾಗವನ್ನು ಕಲ್ಪಿಸುವುದಕ್ಕಾಗಿ ಆಳವಾದ ಜಾಗದಲ್ಲಿ ಕಲ್ಲು ಇಲ್ಲವೆ ಕಾಂಕ್ರೀಟನಿಂದ ಅಲೆತಡೆಗಳನ್ನು ಕಟ್ಟುತ್ತಾರೆ. ಇವು ಕಡಲ ಕರೆಯಲ್ಲಿ ಮರಳು ಚಲಿಸುವುದನ್ನು ತಡೆಯುತ್ತವೆ. ಇದರಿಂದ ಒಂದು ಕಡೆ ಮರಳು ಶೇಖರವಾಗಿ ಇನ್ನೊಂದು ಕಡೆ ಸಮುದ್ರತೀರ ಕೊರೆದುಹೋಗುತ್ತೆ. ಆದರೆ ಸಮುದ್ರತೀರದಲ್ಲಿ ಅಲೆತಡೆಗಳನ್ನು ಕಟ್ಟಿದಾಗ ಹಿಂಭಾಗದಲ್ಲಿ ದಡ ಕೊರೆಯದಂತೆ ಇವು ತಡೆಯುತ್ತವೆ.

ಜೆಟ್ಟಿಗಳು : ಆಳವಿಲ್ಲದ ಸ್ಥಳದಲ್ಲಿ ಕಾಣಿಸುವ ಮರಳು ದಿಬ್ಬಗಳ ಮೂಲಕ ಜಲಯಾನದ ನಾಲೆಯನ್ನು ಭದ್ರಪಡಿಸಿ ಮೇಲ್ಪಾಡನ್ನು ಮಾಡುವುದಕ್ಕಾಗಿ ನದಿಯ ಅಳಿವೆಯ ಬಾಯಲ್ಲಿ ಕಟ್ಟರುವ ಕಟ್ಟಡಗಳಿಗೆ ಜೆಟ್ಟಿಗಳು ಎನ್ನುತ್ತಾರೆ. ಇವುಗಳ ಕ್ರಿಯೆಯೂ ಅಲೆತಡೆಗಳ ಹಾಗೆಯೇ-ಅಳಿವೆಗೆ ಅಡ್ಡಲಾಗಿ ಕಡಲ ಕರೆಯಲ್ಲಿ ಮರಳು ಕೊಚ್ಚಿಹೋಗುವುದನ್ನು ತಡೆಯುತ್ತವೆ.

ಜಲಯಾನದ ನಾಲೆಗಳು : ಸಾಮಾನ್ಯವಾಗಿ ಅಳಿವೆಯ ಬಾಯಿಯಲ್ಲಿ ಮರಳಿನ ದಿಬ್ಬವೊಂದಿರುವುದು. ಇದರ ಮೇಲುಗಡೆ ಕಡಲ ಕರೆಯಲ್ಲಿ ಮರಳು ಹೋಗುತ್ತದೆ. ಜಲಯಾನದ ಸೌಕರ್ಯಕ್ಕಾಗಿ ಈ ದಿಣ್ಣೆಯಲ್ಲಿ ಹೂಳನ್ನು ಎತ್ತಿ ಆಳವಾದ ನಾಲೆಯನ್ನು ತೋಡಬೇಕಾಗುತ್ತದೆ. ಆಮೇಲೆ ನಾಲೆಯಲ್ಲಿ ಶೇಖರವಾಗುವ ಮರಳನ್ನು ಆಗಾಗ ಎತ್ತಿ ಸಮುದ್ರದೊಳಕ್ಕೆ ಹಾಕುತ್ತಾರೆ. ಈ ರೀತಿಯಲ್ಲಿ ಕಡಲ ಕರೆಯ ಮರಳಿಗೆ ದಾರಿಯಲ್ಲಿದೆ ಕೆಳಭಾಗ ಕೊರೆದು ಹೋಗುತ್ತದೆ.

ಮರಳಿನ ರಾಶಿಯ ಸಾಗಣೆ : ಸಾಮಾನ್ಯ ಪರಿಸ್ಥಿತಿಯಲ್ಲಿ ಸಮುದ್ರದ ತೀರದಲ್ಲಿ ಗುಡ್ಡೆಯಾಗಿ ಬಿದ್ದಿರುವ ಮರಳಿನ ರಾಶಿಗಳಲ್ಲಿನ ಸಮುದ್ರದ ಕಡೆಯ ಮುಖಗಳು ಕೊರೆದು ಹೋಗುತ್ತವೆ. ಬಳಿಕ ಆ ಮರಳು ದಡ ಕೊರೆದಲ್ಲಿಗೆ ಹೋಗಿ ತುಂಬಿಕೊಳ್ಳುತ್ತದೆ. ಆಮೇಲೆ ಗಾಳಿ ತೀರದ ಕಡೆಗೆ ಬೀಸುವಾಗ ದಡದ ಮರಳನ್ನು ಹಾರಿಸಿ ಮರಳ ರಾಶಿಗಳನ್ನು ಮತ್ತೆ ತುಂಬಿಸುತ್ತದೆ. ಜನಸಮೃದ್ಧವಾದ ಸಮುದ್ರ ತೀರಗಳಲ್ಲಿ ಈ ರಾಶಿಗಳ ಮರಳನ್ನು ಕಟ್ಟಡಗಳನ್ನು ಕಟ್ಟಲು ಸಾಗಿಸುತ್ತಾರೆ. ಇನ್ನು ಕೆಲವು ಕಡೆ ಜಮೀನಿನ ಮೇಲ್ಪಾಡಿಗೋಸ್ಕರ ಆರಂಭಗಾರರು ಮರಳ ರಾಶಿಗಳನ್ನು ತೆಗೆಯುತ್ತಾರೆ. ಆಗ ಜಮೀನಿನ ಮೇಲೆ ಬಿರುಗಾಳಿಯಲ್ಲಿ ಅಲೆಗಳು ನುಗ್ಗಿ ಅಪಾರವಾದ ನಷ್ಟವನ್ನುಂಟುಮಾಡುತ್ತವೆ.

ಕರಾವಳಿಯ ರಕ್ಷಣೆಯ ಕ್ರಮಗಳು : ಈ ಕ್ರಮಗಳು ಕೊರೆತದ ಕಾರಣಕ್ಕೂ ತೀರದ ಭೂಮಿಯ ಬೆಲೆಗೂ ಅನುಸಾರವಾಗಿರುತ್ತವೆ. ಇವುಗಳಲ್ಲಿ ಮುಖ್ಯವಾದುವನ್ನು ಕೆಳೆಗೆ ಕೊಟ್ಟಿದೆ.

1 ಕಲ್ಲಿನ ರಾಶಿ : ಸಮುದ್ರತೀರ ಕೊರೆಯದ ಹಾಗೆ ಕಲ್ಲಿನ ಚೂರುಗಳನ್ನು ಮರಳಿನ ಮೇಲುಗಡೆ ಮುಚ್ಚುತ್ತಾರೆ. ಈ ಕಲ್ಲುಗಳು ಅಲೆಗಳು ಮೇಲೆ ಉರುಳಿದಾಗ ಕದಲದಷ್ಟು ದೊಡ್ಡವಾಗಿರಬೇಕು. ಕಲ್ಲುಗಳ ಸಂದುಗಳಲ್ಲಿ ಅಲೆಗಳು ನುಗ್ಗಿ ಮರಗಳನ್ನು ಕೊರೆಯದ ಹಾಗೆ ದೊಡ್ಡ ಕಲ್ಲುಗಳ ಕೆಳಗಡೆ ಸಣ್ಣ ಕಲ್ಲುಗಳ ವರಸೆಯೊಂದಿರಬೇಕು.

2 ದಡದ ಮೇಲೆ ನೆಲಹಾಸು : ಅಲೆಗಳ ಹೊಡೆತವನ್ನು ಎದುರಿಸವುದಕ್ಕಾಗಿ ದಡದ ಮೇಲೆ ಕಲ್ಲು, ಕಾಂಕ್ರೀಟು, ಇಲ್ಲವೆ ಬಿಟ್ಯುಮಿನನ್ನು ಒಂದೇ ಮಟ್ಟವಾಗಿ ಹಾಸುತ್ತಾರೆ.

3 ಸಮುದ್ರದ ಗೋಡೆಗಳು : ಈ ಗೋಡೆಗಳನ್ನು ನೀರಿನ ಅಂಚಿನಲ್ಲಿ ಕಟ್ಟಿ ಅಲೆಗಳ ಸಂಪುರ್ಣವಾದ ಹೊಡೆತವನ್ನು ತಡೆಯುವಂತೆ ಸಂವಿಧಾನವನ್ನು ಮಾಡಿರುತ್ತಾರೆ. ಇವು ಕಲ್ಲು ಇಲ್ಲವೆ ಕಾಂಕ್ರೀಟಿನ ಭದ್ರವಾದ ಗೋಡೆಗಳಂತೆ ಇರುತ್ತವೆ. ಒಡೆಯುವ ಅಲೆಗಳು ಗೋಡೆಗೆ ಬಡಿದಾಗ ಬೀಳುವ ಆಘಾತವನ್ನು ತಡೆದುಕೊಳ್ಳುವುದಕ್ಕೂ ಗೋಡೆಯ ತಲೆಯ ಮೇಲೆ ಹೆಚ್ಚು ನೀರು ಉರುಳದ ಹಾಗೂ ಗೋಡೆಯ ಸಮುದ್ರದ ಕಡೆಯ ಮುಖಕ್ಕೆ ಬೇರೆಬೇರೆಯ ಆಕಾರಗಳನ್ನು ಕೊಡುತ್ತಾರೆ.

4 ಸಮುದ್ರದ ಅಡ್ಡಕಟ್ಟೆಗಳು : ಈ ಕ್ರಮದಲ್ಲಿ ಸಮುದ್ರತೀರದ ಮೇಲೆ ಮರಳಿನ ಇಲ್ಲವೆ ಮಣ್ಣಿನ ಏರಿಯನ್ನು ಕಟ್ಟಿ ಅದರ ಸಮುದ್ರದ ಕಡೆಯ ಮುಖಕ್ಕೆ ಕಲ್ಲು ಇಲ್ಲವೆ ಕಾಂಕ್ರೀಟಿನಿಂದ ರಕ್ಷಣೆಯನ್ನು ಕೊಡುತ್ತಾರೆ. ಉತ್ತರ ಸಮುದ್ರದ ತೀರದ ಮೇಲೆ ಹಾಲೆಂಡಿನಲ್ಲಿ ಈ ಸಂವಿಧಾನವನ್ನು ವಿಶೇಷವಾಗಿ ಬಳಸಿದ್ದಾರೆ.

5 ಅಲೆತಡೆಗಳು : ಹಿಂದೆ ನೋಡಿದ ಅಲೆತಡೆಗಳನ್ನು ಸಮುದ್ರತೀರದಲ್ಲಿ ಕಟ್ಟಿದಾಗ ಇವು ಹಿಂಭಾಗದಲ್ಲಿ ದಡ ಕೊರೆಯದಂತೆ ತಡೆಯುತ್ತವೆ.
6 ತಡೆಕಟ್ಟು : ಇದನ್ನು ಸಮುದ್ರತೀರದಿಂದ ಅದಕ್ಕೆ ಸಮಕೋನವಾದ ದಿಕ್ಕಿನಲ್ಲಿ ಮರ, ಕಲ್ಲು, ಕಾಂಕ್ರೀಟ್-ಇವುಗಳಿಂದ ಕಟ್ಟುತ್ತಾರೆ. ಇದು ಕಡಲ ಕರೆಯ ಮರಳನ್ನು ತಡೆದು ತೀರದಲ್ಲಿರುವ ಮರಳು ಹೊರಗೆ ಹೋಗುವಂತೆ ಮಾಡುತ್ತದೆ. ಕೆಲವು ಕಡೆ ಅನೇಕ ತಡೆಕಟ್ಟುಗಳನ್ನು ದೂರದೂರವಾಗಿ ಸಮಾಂತರವಾಗಿ ಸಮುದ್ರತೀರದಲ್ಲಿ ಕಟ್ಟುವುದೂ ಉಂಟು.

ಸಮುದ್ರತೀರದ ರಕ್ಷಣೆಗಾಗಿ ತಡೆಗಟ್ಟುಗಳನ್ನು ಬಹಳ ಹಿಂದಿನಿಂದಲೂ ಉಪಯೋಗಿಸುತ್ತಿದ್ದಾರೆ. ಅವು ಮರಳನ್ನು ತಡೆದು ಸಮುದ್ರದ ಕರೆಯನ್ನು ಅಗಲವಾಗಿ ಮಾಡುತ್ತವೆ. ತೀರ ಕೊರೆದು ಹೋಗುತ್ತಿದ್ದರೆ ತಡೆಕಟ್ಟುಗಳು ಕೊರೆತವನ್ನು ಕಡಿಮೆ ಮಾಡುತ್ತವೆ. ತಡೆಕಟ್ಟುಗಳಲ್ಲಿ ಮುಖ್ಯವಾಗಿ ಎರಡು ನಮೂನೆಗಳಿವೆ. ಒಂದರಲ್ಲಿ ಮರಳು ಅದರ ಮೂಲಕ ತೂರಿ ಹೋಗುತ್ತದೆ; ಇನ್ನೊಂದು ಮರಳನ್ನು ತಡೆದು ನಿಲ್ಲಿಸುತ್ತದೆ. ಈ ನಮೂನೆಯೇ ಹೆಚ್ಚಾಗಿ ಬಳಕೆಯಲ್ಲಿದೆ. ಇದು ಮರಳನ್ನು ತಡೆಕಟ್ಟಿನ ಮೇಲುಭಾಗ ದಿಂದಲೂ ಸಮುದ್ರದ ಕಡೆಯ ಕೊನೆಯ ಸುತ್ತಲೂ ಆಚೆಗೆ ಬಿಡುತ್ತದೆ. ತಡೆಕಟ್ಟಿನ ಉದ್ದ ಕಡಲಕರೆಯ ಮರಳನ್ನು ಬಹುಕಾಲ ನಿಲ್ಲಿಸುವಷ್ಟು ಹೆಚ್ಚಾಗಿರಬಾರದು.

ಮರಳನ್ನು ತುಂಬುವುದು : ಸಮುದ್ರದ ಕರೆಯನ್ನು (ಬೀಚ್) ಇಳಿಜಾರಾಗಿ ಮಾಡುವುದಕ್ಕಾಗಿ ತೀರದ ಮೇಲೆ ಕೃತಕವಾಗಿ ಮರಳನ್ನು ತುಂಬುವುದುಂಟು. ಏಕೆಂದರೆ ಅಲೆಗಳ ಶಕ್ತಿಯನ್ನು ಈ ಇಳಿಜಾರಾದ ಮರಳಿನ ತೀರ ನಾಶಪಡಿಸುತ್ತದೆ. ಈ ಮರಳು ಸಮುದ್ರಕ್ಕೂ ತೀರದ ಆಚೆಯ ಕಟ್ಟಡಗಳಿಗೂ ನಡುವೆ ರಕ್ಷಣೆಯನ್ನು ಕೊಡುತ್ತದೆ. ಇದರಿಂದ ಕರೆಯ ಅಗಲವೂ ಹೆಚ್ಚಾಗಿ ಆಟೋಟಗಳಿಗೆ ಅನುಕೂಲವಾಗುತ್ತದೆ. ಚೆನ್ನೈ, ಮುಂಬಯಿಯಂಥ ಸಮುದ್ರತೀರಗಳಲ್ಲಿ ವಿನೋದಕ್ಕಾಗಿ ಸಾವಿರಾರು ಜನರು ಪ್ರತಿದಿನವೂ ಸಾಯಂಕಾಲ ಬರುತ್ತಾರೆ. ವಿಶಾಲವಾದ ಮರಳಿನ ಮೆಲೆ ಅವರು ವಿಶ್ರಮಿಸಿಕೊಳ್ಳಲು ಅನುಕೂಲವಾಗುತ್ತದೆ. ಕೆಲವು ವರ್ಷಗಳ ಹಿಂದೆ ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ನ್ಯೂಜೆರ್ಸಿ ಸಮುದ್ರತೀರದ ಮೇಲೆ 10 ಲಕ್ಷ ಸಲೆ ಗಜ ಮರಳನ್ನು ತುಂಬಿ ಅಲ್ಲಿಗೆ ಬರುವ ಜನರಿಗೆ ಸೌಕರ್ಯವನ್ನು ಮಾಡಿಕೊಟ್ಟರು. ಈ ಮರಳಿನ ಸ್ವಲ್ಪ ಭಾಗವನ್ನು ಆಗಾಗ ಭರ್ತಿ ಹಾಕಬೇಕಾಗುತ್ತದೆ.

ಸಂವಿಧಾನದ ಕ್ರಮಗಳು : ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಪರಿಣಾಮಕಾರಿಯಾಗಿ ಸಮುದ್ರತೀರಕ್ಕೆ ರಕ್ಷಣೆಯನ್ನು ಒದಗಿಸಬೇಕಾದರೆ ಮೊದಲು ಕೊರೆತದ ಕಾರಣವನ್ನು ಕಂಡುಹಿಡಿಯಬೇಕು. ನಷ್ಟಕ್ಕೆ ಗುರಿಯಾಗುವ ಆಸ್ತಿಯ ಬೆಲೆಯನ್ನು ನಿರ್ಣಯಿಸಬೇಕು. ಆಹಾರವಿಹಾರಕ್ಕಾಗಿ ಸಮುದ್ರತೀರ ಉಪಯೋಗವಾಗುವ ಹಾಗಿದ್ದರೆ ಅದರ ಮೇಲೆ ಹೆಚ್ಚು ಹಣವನ್ನು ವೆಚ್ಚ ಮಾಡಿದರೂ ಸಾರ್ಥಕವಾಗುತ್ತದೆ. ಅನಂತರ  ಆ ಪ್ರದೇಶದಲ್ಲಿ ಸುಲಭವಾಗಿ ದೊರಕುವ ಕಟ್ಟಡಗಳ ಸಾಮಗ್ರಿಗಳನ್ನು ನೋಡಿಕೊಂಡು ಅಂದಾಜುಗಳನ್ನು ತಯಾರಿಸಬಹುದು.
ಎರಡನೆಯ ಮಹಾ ಯುದ್ಧಕ್ಕೆ ಮುಂಚೆ ತೀರದ ಕೊರೆತದ ಎಲ್ಲ ಸಮಸ್ಯೆಗಳನ್ನೂ ಸಮುದ್ರದ ಗೋಡೆಗಳು ಮತ್ತು ತಡೆಕಟ್ಟುಗಳಿಂದ ಎದುರಿಸುತ್ತಿದ್ದರು. ಗೋಡೆಯನ್ನು ಕಟ್ಟುವುದಕ್ಕೆ ವೆಚ್ಚ ಹೆಚ್ಚಾಗುತ್ತದೆ. ಆದರೆ ಬೆಲೆಬಾಳುವ ಆಸ್ತಿಯನ್ನು ಕಾಪಾಡಬೇಕಾದಾಗ ಸಮುದ್ರದ ಗೋಡೆ ಅನಿವಾರ್ಯವಾಗುತ್ತದೆ.

ಈ ಗೋಡೆ ಸಮುದ್ರಕ್ಕೂ ನೆಲಕ್ಕೂ ನಡುವೆ ಎಲ್ಲೆಯನ್ನು ಭದ್ರವಾಗಿ ಗುರುತು ಮಾಡುತ್ತದೆ. ಈ ಅನುಕೂಲತೆ ತಡೆಗಟ್ಟಿನಿಂದ ದೊರೆಯುವುದಿಲ್ಲ. ಅದರ ಖರ್ಚೂ ಕಡಿಮೆ. ತಡೆಗಟ್ಟುಗಳು ಕೂಡಿಹಾಕಿರುವ ಮರಳನ್ನು ಬಲವಾದ ಗಾಳಿ ಎದ್ದಾಗ ನುಗ್ಗುವ ಅಲೆಗಳು ಹೊರಕ್ಕೆ ಎಳೆದು ತಿರುಗಿ ಸಮುದ್ರಕ್ಕೆ ಸಾಗಿಸುತ್ತವೆ. ಮತ್ತೆ ತೆರೆದ ಸಮುದ್ರತೀರದ ಕೊರೆದುಹೋಗಬಹುದು. ಅದಕ್ಕಾಗಿ ತಡೆಗಟ್ಟುಗಳ ಜೊತೆಗೆ ಹಗುರವಾದ ಸಮುದ್ರದ ಗೋಡೆಯನ್ನು ಕಟ್ಟುವುದು ಮೇಲು. ಈ ಕಟ್ಟಡಗಳನ್ನು ಕಟ್ಟುವಾಗ ಬಿರುಗಾಳಿಯಲ್ಲಿ ಸಮುದ್ರತೀರ ಕೊರೆದುಹೋಗುಬಹುದಾದ ಮಟ್ಟಕ್ಕಿಂತ ತಗ್ಗಿನಲ್ಲಿ ತಳಪಾಯವನ್ನು ಹಾಕಬೇಕು. ಈ ಗೋಡೆಗಳ ಸಂವಿಧಾನದಲ್ಲಿ ಬಿರುಗಾಳಿಯಲ್ಲಿ ಏರುವ ಅಲೆಗಳ ಎತ್ತರವೇನು, ಅವು ಈ ಕಟ್ಟಡಗಳ ಮೇಲೆ ಎಷ್ಟು ದೂರ ನುಗ್ಗುತ್ತವೆ ಎಂಬುದನ್ನೂ ಪರಿಶೀಲಿಸಬೇಕು. ಗರಿಷ್ಠ ನೀರಿನ ಮಟ್ಟಕ್ಕೆ ಗೋಡೆಯನ್ನು ಎತ್ತುವುದು ಸಾಧ್ಯವಾಗದೆ ಇದ್ದರೆ ಕಟ್ಟಡದ ಮೇಲೆ ಉರುಳಿ ಹಿಂದುಗಡೆ ರಸ್ತೆಗಳ ಮೇಲೂ ಬೆಲೆಬಾಳುವ ಆಸ್ತಿಯ ಮೇಲೂ ಹರಿಯುವ ನೀರೆಷ್ಟು ಎಂದು ಅಂದಾಜು ಮಾಡಬೇಕು.
ಆ ಪ್ರದೇಶದಲ್ಲಿ ಒಳ್ಳೆಯ ಕಲ್ಲು ಸಾಕಷ್ಟು ಸಿಕ್ಕುತ್ತದೆಯೇ ಅಥವಾ ಬಿಟ್ಯುಮಿನ್ ಇಲ್ಲವೆ ಸಿಮೆಂಟ್ ಸುಲಭವಾಗಿ ದೊರಕುತ್ತದೆಯೇ ಅಲ್ಲಿ ಕುಶಲಿಗಳಾದ ಕೆಲಸಗಾರ ರಿದ್ದಾರೆಯೇ ಅಥವಾ ದೊಡ್ಡ ಯಂತ್ರಗಳನ್ನು ಉಪಯೋಗಿಸಬೇಕೇ-ಇವನ್ನೆಲ್ಲ ವಿಚಾರ ಮಾಡಿ ಸಂವಿಧಾನವನ್ನೂ ಅಂದಾಜನ್ನೂ ತಯಾರಿಸಬೇಕು.

ಸಮುದ್ರತೀರದಲ್ಲಿ ತುಂಬುವುದಕ್ಕೆ ಆದಷ್ಟು ದಪ್ಪವಾದ ಮರಳನ್ನು ಉಪಯೋಗಿಸಬೇಕು. ಮರಳು ನಯವಾಗಿದ್ದರೆ ಆಳವಾದ ನೀರಿನ ಕಡೆಗೆ ತೊಳೆದು ಹೋಗುತ್ತದೆ. ವಿಹಾರಕ್ಕಾಗಿ ಉಪಯೋಗವಾಗುವ ಸಮುದ್ರತೀರಗಳು ಸಾಧ್ಯವಾದಷ್ಟು ಅಗಲವಾಗಿರಬೇಕು. ಆಗ ಪ್ರಬಲವಾದ ಗಾಳಿಯಲ್ಲಿ ಬಂದ ಅಲೆಗಳು ಮರಳನ್ನು ಕೊರೆಯುವುದು ಕಡಿಮೆಯಾಗುತ್ತದೆ. ಇದಕ್ಕೆ ಪ್ರತಿಯಾಗಿ ಹವೆ ಹಿತವಾಗಿದ್ದಾಗ ಬರುವ ಸಣ್ಣ ಅಲೆಗಳು ಮರಳನ್ನು ತಿರುಗಿ ತಂದು ತೀರಕ್ಕೆ ತುಂಬುತ್ತವೆ. ಆಗ ಸಮುದ್ರತೀರದ ಅಗಲ ಮೊದಲಿನಷ್ಟೇ ಆಗುತ್ತದೆ.
(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ